ವಿಷಯಕ್ಕೆ ಹೋಗು

ಭಜನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನವರಾತ್ರಿಯ ಗೋಲು ಸಮಯದಲ್ಲಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಭಜನೆ

ಭಜನೆಯು ಧಾರ್ಮಿಕ ವಿಷಯ ಅಥವಾ ಆಧ್ಯಾತ್ಮಿಕ ವಿಚಾರಗಳನ್ನು ಹೊಂದಿರುವ ಭಕ್ತಿಗೀತೆಯನ್ನು ಸೂಚಿಸುತ್ತದೆ.[೧] ಭಜನಂ (ಸಂಸ್ಕೃತ: भजनम्) ಎಂಬ ಪದವು ಪೂಜ್ಯಭಾವನೆ ಎಂಬ ಅರ್ಥವನ್ನು ಕೊಡುತ್ತದೆ. ಭಜ್ (ಸಂಸ್ಕೃತ: भज्) ಎಂಬ ಮೂಲ ಪದದಿಂದ ಭಜನೆ ಎಂಬ ಪದ ಹುಟ್ಟಿಕೊಂಡಿದೆ. ಇದರರ್ಥ 'ಭಜ ಗೋವಿಂದಂ' (ಪೂಜ್ಯ ಗೋವಿಂದ) ನಲ್ಲಿರುವಂತೆ ಪೂಜಿಸು ಎಂದು. ಭಜನಾ ಎಂಬ ಪದಕ್ಕೆ ಹಂಚಿಕೆ ಎಂಬ ಅರ್ಥವೂ ಇದೆ.[೨] ಭಜನೆ ಕರ್ನಾಟಕದಾದ್ಯಂತ ಕಂಡು ಬರುವ ಒಂದು ಜಾನಪದ ಕಲೆ.[೩] ಒಂದೊಂದು ಭಾಗದಲ್ಲಿ ಹಾಡುವ ಭಜನೆಗಳ ಹಿನ್ನಲೆ ಹಾಗೂ ಪ್ರಕಾರಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಒಟ್ಟಾಗಿ ಭಜನೆ ಮೇಳಗಳು ಒಂದಲ್ಲಾ ಒಂದು ರೀತಿಯಲ್ಲಿ ನಾಡಿನ ಉದ್ದಗಲಕ್ಕೂ ವ್ಯಾಪಿಸಿವೆ.[೪]

ಹಿನ್ನೆಲೆ[ಬದಲಾಯಿಸಿ]

ಮಧ್ಯಕಾಲೀನ ಭಕ್ತಿಯುಗ ಈ ಭಜನೆ ಸಂಪ್ರದಾಯಕ್ಕೆ ಹತ್ತಿರವಾದದ್ದು.[೫] ಶೈವ ಮತ್ತು ವೈಷ್ಣವ ಪಂಥಗಳೆರಡೂ ವ್ಯಾಪಕವಾಗಿ ಭಜನೆಯ ಪರಂಪರೆಯುನ್ನು ಹುಟ್ಟು ಹಾಕಿದವು. ವೈದಿಕ ಪರಂಪರೆಯ ನಿಗೂಢತೆಯನ್ನು ಸೀಮಿತತೆಯನ್ನು ಮೊಟ್ಟ ಮೊದಲ ಬಾರಿಗೆ ಸಾಮಾಜಿಕವಾಗಿ ಸಾರ್ವತ್ರಿಕಗೊಳಿಸಲಾಯಿತು. ಈ ಪರಂಪರೆಯ ದಾಸರು ಭಜನೆಗಳಿಗೆ ತಾತ್ವಿಕ ರೂಪವೊಂದನ್ನು ಕೊಡುವುದಕ್ಕೆ ಸಮರ್ಥರಾದರು. ನವ ವಿಧ ಭಕ್ತಿಗಳ ಮೂಲಕ ಅವರು ಭಜನೆಗೊಂದು ವ್ಯಾಖ್ಯಾನವನ್ನು ನೀಡಿದರು. ಹೀಗೆ ವ್ಯಾಖ್ಯಾನ ಕೊಡುವುದರ ಮೂಲಕವೇ ಅವರ ಭಜನೆಗೊಂದು ನಿರ್ದಿಷ್ಟತೆ ದೊರೆಯಿತು.[೬][೭][೮][೯]

ಭಜನೆ ಸಂಪ್ರದಾಯ[ಬದಲಾಯಿಸಿ]

ಹಿಂದೂ ಕೀರ್ತನೆಯ ಕೆಲವು ಸಾಲುಗಳು

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ...
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ...
ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದು...
ದಾಯಾದಿ ಬಂಧುಗಳ ಬಿಡಲುಬಹುದು...
ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು...
ಕಾಯಜಾಪಿತನಿನ್ನಡಿಯ ಬಿಡಲಾಗದು..ಬಿಡಲಾಗದು..ಬಿಡಲಾಗದು.

— ಕನಕದಾಸ

ಭಜನೆ ಸಂಪ್ರದಾಯದ ವೈಶಿಷ್ಟ್ಯವೆಂದರೆ ವ್ಯಾಖ್ಯಾನವನ್ನು ಕಾಲಾಂತರದಲ್ಲಿ ಮುರಿದುದು, ಅಷ್ಟು ಮಾತ್ರವಲ್ಲ ಶೈವ ಮತ್ತು ವೈಷ್ಣವ ಎನ್ನುವ ವಿಂಗಡಣೆಯ ಗೆರೆಯನ್ನು ದಾಟಿ ಭಾವೈಕ್ಯದ ಕಡೆಗೆ ಸಾಗಿದರು. ಜನಪದರ ಭಜನೆಗಳೆಂದರೆ ಜಾತಿ, ಮತಗಳನ್ನು ಮೀರಿದ ದೇಶಿಯ ಆರಾಧನಾ ಗೀತೆಗಳ ಸಂಪ್ರದಾಯ.[೧೦] ಅದರಲ್ಲಿ ಇಲ್ಲಿಯ ಗ್ರಾಮ ದೇವತೆಗಳ ಸ್ತುತಿಯೇ ಮುಖ್ಯವಾದದು. ಛಂದಸ್ಸು ಕೂಡ ಶುದ್ಧವಾಗಿ ದೇಶೀಯ ದಾಸರು ಬಳಸಿದ ಭಾಷೆ. ಛಂದಸ್ಸುಗಳ ಶಿಷ್ಠ ರೂಪವನ್ನು ಇಲ್ಲಿ ಗುರುತಿಸುವಂತಿಲ್ಲ, ಬಹುತೇಕವಾಗಿ ಅವು ಆಯಾ ಪ್ರಾದೇಶಿಕ ಭಾಷೆಯ ರೂಪವನ್ನು ಪಡೆಯುತ್ತವೆ.[೧೧][೧೨] ಹಿಂದೂ ಮುಸಲ್ಮಾನ ಎನ್ನುವ ಭೇದವಿಲ್ಲದೆ ಭಜನೆಗಾರರ ಮೇಳಗಳು ಕಂಡು ಬರುತ್ತವೆ. ಹಿಂದೂಗಳು ಮುಸಲ್ಮಾನ ಧರ್ಮದ ವಿಚಾರಗಳನ್ನು ಮುಸಲ್ಮಾನರು ಹಿಂದೂ ಧರ್ಮದ ವಿಚಾರಗಳನ್ನು ಭಜನೆಯಲ್ಲಿ ಒಳಗೊಳಿಸುವುದು ಇಲ್ಲಿಯ ವಿಶೇಷ.[೧೩][೧೪][೧೫]

ಭಜನೆಯ ವಿಂಗಡಣೆ[ಬದಲಾಯಿಸಿ]

ಭಜನೆಯನ್ನು ವ್ಯಕ್ತಿಗತ ಮತ್ತು ಸಾಮೂಹಿಕ ಎಂದು ಎರಡು ಹಂತಗಳಲ್ಲಿ ವಿಭಾಗಿಸಬಹುದು.

ವ್ಯಕ್ತಿಗತ ಭಜನೆ[ಬದಲಾಯಿಸಿ]

ವ್ಯಕ್ತಿಗತ ಭಜನೆಯ ಸ್ಪಷ್ಟ ರೂಪಗಳನ್ನು ಏಕತಾರಿ ಪದಗಳನ್ನು ಕಾಣುತ್ತೇವೆ. ಏಕತಾರಿ ನುಡಿಸುತ್ತಾ ತಾನೊಬ್ಬನೆ ಭಜನೆ ಹಾಡುವುದು ಅಲ್ಲಿಯ ಕ್ರಮ.

ಸಾಮೂಹಿಕ ಭಜನೆ[ಬದಲಾಯಿಸಿ]

ಸಾಮೂಹಿಕ ಭಜನೆ ಮೇಳ ರೂಪದ್ದು. ಇಲ್ಲಿಯ ಸಂಖ್ಯೆಯನ್ನು ನಿರ್ಧಿಷ್ಟವಾಗಿ ಹೇಳದೆ ಒಂದಕ್ಕಿಂತ ಹೆಚ್ಚು ಎನ್ನುವುದೇ ಸೂಕ್ತ. ತಾಳ, ತಪ್ಪಡಿ, ಏಕತಾರಿ, ಚಾಜು, ಶ್ರುತಿ ಮೊದಲಾದ ವಾದ್ಯ ವಿಶೇಷಗಳು ಇಲ್ಲಿರುತ್ತವೆ. ಸಾಮೂಹಿಕ ಭಜನೆಯಲ್ಲಿ ಹಿಮ್ಮೇಳವಿರುತ್ತದೆ. ಮುಖ್ಯಗಾಯಕ ಭಜನೆಯನ್ನು ಹಾಡುತ್ತಾ ಹೋದಂತೆ ಉಳಿದವರು ಅದೇ ಧಾಟಿಯಲ್ಲಿ ಅದನ್ನು ಪುನರಾವರ್ತಿಸುತ್ತಾರೆ, ಕೆಲವೊಮ್ಮೆ ಪಲ್ಲವಿಯ ಭಾಗವನ್ನು ಪುನರಾವರ್ತಿಸಿದರೆ, ಇನ್ನು ಕೆಲವೊಮ್ಮೆ ಜತೆಯಲ್ಲೆ ಇಡೀ ಹಾಡನ್ನು ಪುನರಾವರ್ತಿಸುವುದು ಕಂಡು ಬರುತ್ತದೆ.[೧೬][೧೭][೧೮][೧೯]

ಭಜನೆಯ ಲಕ್ಷಣ[ಬದಲಾಯಿಸಿ]

ನಿಧಾನಗತಿಯಲ್ಲಿ ಆರಂಭವಾಗಿ ಆ ಮೇಲೆ ತ್ವರಿತಗತಿಯಲ್ಲಿ ಮುಕ್ತಾಯವಾಗುವುದು ಭಜನೆಗಳ ಸಾಮಾನ್ಯ ಲಕ್ಷಣ. ಪ್ರತಿಯೊಂದು ಭಜನೆ ಆರಂಭವಾಗುವಾಗ ಮತ್ತು ಮುಗಿಯುವಾಗ ಮುಖ್ಯಗಾಯಕನು "ಹರ ಹರ ಮಹಾದೇವ" ಎನ್ನುತ್ತಾರೆ. ಆಗ ಎಲ್ಲರೂ ಅದನ್ನು ಪುನರಾವರ್ತಿಸುತ್ತಾರೆ.[೨೦] ಹಾಗೆಯೇ "ಶ್ರೀ ಮದ್‌ರಮಾರಮಣ ಗೋವಿಂದ" ಎಂದಾಗ "ಗೋವಿಂದ ಗೋವಿಂದ" ಎಂದು ಗುಂಪಿನಲ್ಲಿ ಗೋವಿಂದವಾಗುವುದು ಇದೆ. ಭಜನೆಯ ಕೊನೆಯ ಹಂತವೆಂದರೆ "ಮಂಗಳ ಪದ". ಆಗ ಹೇಳಿದ ಜಯಕಾರಗಳು ಬಹಳ ಹೊತ್ತಿನವರೆಗೆ ನಡೆಯುತ್ತವೆ. ಸ್ಥಳೀಯ ದೇವರುಗಳಿಗೂ ಆಗ ಜಯಕಾರಗಳಿರುತ್ತವೆ.[೨೧]

ಭಜನೆಯ ಕಾಲ[ಬದಲಾಯಿಸಿ]

ನಿತ್ಯದ ಭಜನೆಗಳು, ವಾರದ ಭಜನೆಗಳು, ವರ್ಷದ ಭಜನೆಗಳೆಂದು ಸ್ಥೂಲವಾಗಿ ಭಜನೆಯ ಕಾಲಗಳನ್ನು ವಿಭಾಗಿಸಬಹುದು. ಇದಲ್ಲದೇ ಸೋಮವಾರ, ಶನಿವಾರ ಮುಂತಾದ ಆಯಾ ದೇವರಿಗೆ ಸಲ್ಲುವ ವಾರಗಳಲ್ಲಿಯೂ ಭಜನೆ ನಡೆಯುವುದಿದೆ.[೨೨][೨೩] [೨೪] ದೇವರ ಗುಡಿ, ಮನೆಗಳಲ್ಲಿ ಹಾಗೂ ಕೆಲವೊಮ್ಮೆ ಬೀದಿ ಬೀದಿಗಳಲ್ಲಿ ನಿರ್ದಿಷ್ಟ ವಾರಗಳಂದು ಭಜನೆ ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ದೇವರ ಭಾವಚಿತ್ರವನ್ನು ಅಲಂಕರಿಸಿ ಮನೆ ಮನೆಗೆ ಹೋಗುತ್ತಾರೆ, ಮನೆಯವರಿಂದ ಹಣ್ಣುಕಾಯಿ ದಕ್ಷಿಣೆ ಪೂಜೆಗಳಾದ ಮೇಲೆ ಗುಡಿಯಲ್ಲಿಯೂ ಭಜನೆ ಇರುತ್ತದೆ. ಇದಕ್ಕೆ 'ಊರಾಡುವುದು' ಎಂದೇ ಹೆಸರು. ಸಾಮಾನ್ಯವಾಗಿ ಭಜನೆ ಮೇಳದವರಿಗೆ ಆಹಾರ ನಿರ್ಬಂಧಗಳಿಲ್ಲ, ಆದರೂ ಕೆಲವೊಮ್ಮೆ ಭಜನೆಕಾರರು ಫಲಾಹಾರವಷ್ಟೆ ಮಾಡುವುದಿದೆ. ತಿಂಗಳು ಭಜನೆಯು ಸಾಮಾನ್ಯವಾಗಿ ಶ್ರಾವಣ ಮತ್ತು ಕಾರ್ತಿಕಮಾಸದಲ್ಲಿ ನಡೆಯುತ್ತದೆ. ಇಂತಹ ಸಂದರ್ಭಗಳಲ್ಲಿ ಹಗಲು-ರಾತ್ರಿ ನಿರಂತರ ಭಜನೆ ನಡೆಯುತ್ತದೆ. ಕೊನೆಯ ದಿನ ವಿಶೇಷ ಪೂಜೆ ಇರುತ್ತದೆ. ಇಂತಹ ಭಜನೆಗಳಲ್ಲಿ ಭಕ್ತಾದಿಗಳು ಕುಣಿಯುವುದೂ ಇದೆ, ಇದನ್ನು ಭಜನೆ ಕುಣಿತ ಎಂದು ಕರೆಯುತ್ತಾರೆ.[೨೫][೨೬][೨೨][೨೭]

ಭಜನೆಯ ಕುಣಿತ[ಬದಲಾಯಿಸಿ]

ಭಜನೆಯ ಕುಣಿತ ಸರಳವಾದದ್ದು, ಕುಣಿಯುವವರು ಕೈತಾಳಗಳನ್ನು ಹಿಡಿದುಕೊಂಡು ವೃತ್ತಾಕಾರವಾಗಿ ಸುತ್ತುತ್ತಾರೆ, ಮಧ್ಯ ಮಧ್ಯ ಭಜನೆಯ ತಾಳ ಲಯಕ್ಕನುಗುಣವಾಗಿ ಒಮ್ಮೆ ಎಡಗಾಲು ಮತ್ತೆ ಬಲಗಾಲನ್ನು ಎತ್ತುತ್ತಾ ಏಕಕಾಲದಲ್ಲಿ ತಾಳವನ್ನು ನುಡಿಸುತ್ತಾರೆ, ಇದು ಒಂದು ವಿಧ. ಇನ್ನೊಂದು ವಿಧದಲ್ಲಿ ಮೇಳದವರೆಲ್ಲರೂ ಮುಂದಕ್ಕೆ ಹಾರಿ ತಾಳ ಹಾಕಿ ಮತ್ತೆ ಹಿಂದಕ್ಕೆ ಹಾರಿ ಇನ್ನೊಮ್ಮೆ ತಾಳ ಹಾಕುತ್ತಾರೆ. ಹೀಗೆ ಹಿಂದಕ್ಕೆ ಹಾರುವಾಗ, ತಿರುಗಿ ಅಂದರೆ ಬೆನ್ನ ಹಿಂದಕ್ಕೆ ತಾಳ ಹಾಕುವುದು ವಾಡಿಕೆ, ಹೀಗೆ ಕೆಲವೊಂದು ಅಂಶಿಕ ಬದಲಾವಣೆಗಳಿದ್ದರೂ ಹೆಚ್ಚಾಗಿ ಈ ಕುಣಿತಗಳಲ್ಲಿ ಏಕತಾನತೆ ಇರುತ್ತದೆ. ಇಂತಹ ಭಜನೆಗಳಿಗೆ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರಿರುತ್ತಾರೆ. ಹಾಗೆಯೇ ಬೆಳಗಿನವರೆಗೆ ಪ್ರತ್ಯಕ್ಷವಾಗಿ ಪಾಲ್ಗೊಳ್ಳುತ್ತಾರೆ. ಸಾಮಾನ್ಯವಾಗಿ ಭಜನೆಗಳಲ್ಲಿ ಸ್ತ್ರೀ ಪುರುಷರೆಂಬ ಭೇಧವಿಲ್ಲ, ಪರಸ್ಪರ ಕಲೆತು ಭಜನೆ ಮಾಡಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸ್ತ್ರೀಯರು ಮತ್ತು ಪುರುಷರು ಪ್ರತ್ಯೇಕವಾಗಿ ಪಂಕ್ತಿಗಳಲ್ಲಿ ಕುಳಿತುಕೊಳ್ಳುತ್ತಾರೆ. ಆದರೆ ಮೇಲೆ ಹೇಳಿದ ಇಂತಹ ಕುಣಿತಗಳಲ್ಲಿ ಸ್ತ್ರೀಯರು ಭಾಗವಹಿಸುವುದಿಲ್ಲ. ಕೆಲವು ಸಂದರ್ಭಗಳಲ್ಲದೆ ಕೆಲವೊಮ್ಮೆ ವ್ಯಕ್ತಿಯ ಮರಣದ ಸಂದರ್ಭದಲ್ಲಿ, ಮೈನೆರೆದಾಗ, ಗುರುಗಳ ಪುಣ್ಯ ದಿನದಲ್ಲಿ, ಗೃಹಪ್ರವೇಶ ಸಂಧರ್ಭದಲ್ಲಿ, ಉರುಸುಗಳಲ್ಲಿಯೂ ಭಜನೆ ನಡೆಯುವುದಿದೆ.

ಜೈನ ಧರ್ಮದಲ್ಲಿ ಭಜನೆ[ಬದಲಾಯಿಸಿ]

ಸ್ತವನ್ ಜೈನ ಧರ್ಮದಲ್ಲಿ ಭಕ್ತಿ ಸಂಗೀತದ ಜನಪ್ರಿಯ ಮತ್ತು ಐತಿಹಾಸಿಕವಾಗಿ ವ್ಯಾಪಕವಾದ ಪ್ರಕಾರವಾಗಿದೆ. ಸ್ತವನದ ವಿಷಯವು ಜಿನ, ಜೈನ ಧಾರ್ಮಿಕ ವಿಚಾರಗಳು ಮತ್ತು ಅದರ ತತ್ತ್ವಶಾಸ್ತ್ರದ ಹೊಗಳಿಕೆಯಿಂದ ಹಿಡಿದು ಭಕ್ತಿಯಿಂದ ಕೂಡಿದ ಭಜನೆಗಳನ್ನು ಒಳಗೊಂಡಿರುತ್ತದೆ.[೨೮]

ಜೈನ ಧರ್ಮವು ಯಾವುದೇ ಸೃಷ್ಟಿಕರ್ತ ದೇವರನ್ನು ತಿರಸ್ಕರಿಸುತ್ತದೆ, ಆದರೆ ರಕ್ಷಕ ದೇವತೆಗಳನ್ನು ಮತ್ತು ಆತ್ಮಗಳ ಪುನರ್ಜನ್ಮವನ್ನು ಸ್ವರ್ಗೀಯ ಜೀವಿಗಳಾಗಿ ಸ್ವೀಕರಿಸುತ್ತದೆ ಮತ್ತು ಅದರ ಭಕ್ತಿ ಹಾಡುವ ಸಂಪ್ರದಾಯಗಳು ಈ ನಂಬಿಕೆಗಳನ್ನು ಸಂಯೋಜಿಸುತ್ತವೆ. ಸ್ತವನ್, ನೃತ್ಯ ಮತ್ತು ಪೂಜಾ ವಿಧಿಗಳನ್ನು ಒಳಗೊಂಡಿರಬಹುದು. ಉತ್ತರ ಮತ್ತು ಪಶ್ಚಿಮ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಭಜನೆ ಎಂದು ಕರೆಯಲ್ಪಡುವ, ಸ್ತವನ್ ಅನ್ನು ಜೈನ ಮಹಿಳೆಯರ ಗುಂಪುಗಳು ವಿಶಿಷ್ಟವಾಗಿ ಜಾನಪದ ಮಧುರವಾಗಿ ಹಾಡಲಾಗುತ್ತದೆ. ಭಜನೆಯು ಜೈನ ಧರ್ಮದೊಳಗಿನ ಸಮಾರಂಭಗಳು ಮತ್ತು ಆಚರಣೆಗಳ ಔಪಚಾರಿಕ ಭಾಗವಾಗಿದೆ.[೨೯]

ಬೌದ್ಧ ಧರ್ಮದಲ್ಲಿ ಭಜನೆ[ಬದಲಾಯಿಸಿ]

ಹಲವಾರು ಬೌದ್ಧ ಸಂಪ್ರದಾಯಗಳು ತಮ್ಮ ಆಚರಣೆಗಳು ಮತ್ತು ಭಕ್ತಿಯ ಆಚರಣೆಗಳ ಭಾಗವಾಗಿ ವಾದ್ಯಗಳೊಂದಿಗೆ ಗಾಯನ ಸಂಗೀತವನ್ನು ಬಳಸುತ್ತವೆ. ಬೌದ್ಧ ಗಾಯನ ಸಂಗೀತ ಮತ್ತು ಪಠಣವು ಸಾಮಾನ್ಯವಾಗಿ ಬೌದ್ಧ ಆಚರಣೆಗಳು ಮತ್ತು ಹಬ್ಬಗಳ ಭಾಗವಾಗಿದ್ದು, ಅವುಗಳನ್ನು ಬುದ್ಧನಿಗೆ ಅರ್ಪಣೆಗಳಾಗಿ ಕಾಣಬಹುದು.

ದಕ್ಷಿಣ ಏಷ್ಯಾದಲ್ಲಿ, ಬೌದ್ಧ ಭಜನೆ ಗಾಯನದ ಹಲವಾರು ಸಂಪ್ರದಾಯಗಳು ಇನ್ನೂ ಇವೆ. ನೆವಾರಿ ಬೌದ್ಧ ಗುನ್ಲಾ ಬಜನ್ ಸಂಪ್ರದಾಯ ಒಂದು ಸುದೀರ್ಘ ಇತಿಹಾಸವನ್ನು ಹೊಂದಿದೆ.

ಬಂಗಾಳಿ ಬರುವಾ ಬೌದ್ಧರು ಸ್ಥಳೀಯ ಭಾಷೆಯಲ್ಲಿ ಹಾಡುಗಳನ್ನು ಹಾಡುವ ಸಂಪ್ರದಾಯವನ್ನು ಹೊಂದಿದ್ದಾರೆ. ಇದನ್ನು ಅವರು ಬುದ್ಧ-ಸಂಕೀರ್ತನ್ ಅಥವಾ ಬುದ್ಧ ಕೀರ್ತನ್ ಎಂದು ಕರೆಯುತ್ತಾರೆ.

ಭಾರತೀಯ ಬೌದ್ಧ ಭಜನೆಗಳ ಇತ್ತೀಚಿನ ಸಂಪ್ರದಾಯವೂ ಇದೆ, ಇದು ಇತ್ತೀಚಿನ ಭಾರತೀಯ ಬೌದ್ಧ ಧರ್ಮಕ್ಕೆ ಮತಾಂತರಗೊಂಡವರಲ್ಲಿ ಜನಪ್ರಿಯವಾಗಿದೆ.

ಶ್ರೀಲಂಕಾದ ಬೌದ್ಧರು ತಮ್ಮದೇ ಆದ ಭಜನೆ ಮತ್ತು ಬೌದ್ಧ ಗೀತೆಗಳ ಸಂಪ್ರದಾಯವನ್ನು ಹೊಂದಿದ್ದಾರೆ.[೩೦][೩೧]

ಸಿಖ್ ಧರ್ಮದಲ್ಲಿ ಭಜನೆ[ಬದಲಾಯಿಸಿ]

ಸಿಖ್ ಸಂಪ್ರದಾಯವು ಒಂದು ನಿರಾಕಾರ ದೇವರಿಗೆ ಭಕ್ತಿಯ ಆರಾಧನೆಗೆ ಪ್ರಮುಖ ಒತ್ತು ನೀಡುತ್ತದೆ ಮತ್ತು ಭಜನೆಗಳು ಈ ಆರಾಧನೆಯ ಒಂದು ಭಾಗವಾಗಿದೆ.[೩೨] ಸಿಖ್ ಧರ್ಮದಲ್ಲಿ ಹೆಚ್ಚು ಸಾಮಾನ್ಯವಾದ ಸಮುದಾಯ ಹಾಡುಗಾರಿಕೆಯನ್ನು ಶಾಬಾದ್ ಕೀರ್ತನ್ ಎಂದು ಕರೆಯಲಾಗುತ್ತದೆ.[೩೩] ಶಾಬಾದ್ ಕೀರ್ತನವನ್ನು ವೃತ್ತಿಪರ ಧಾರ್ಮಿಕ ಸಂಗೀತಗಾರರು ನಿರ್ವಹಿಸುತ್ತಾರೆ. ಇದರಲ್ಲಿ ಸಿಖ್ ಗ್ರಂಥದ ಬಾನಿ ('ಪದ' ಅಥವಾ 'ಸ್ತೋತ್ರಗಳು')ಗಳನ್ನು ಒಂದು ನಿರ್ದಿಷ್ಟ ರಾಗ ಮತ್ತು ತಾಳಕ್ಕೆ ಹಾಡಲಾಗುತ್ತದೆ.

ಉಪಸಂಹಾರ[ಬದಲಾಯಿಸಿ]

ಆರಾಧನಾ ಕಲೆಯಾದ ಭಜನೆ ಸಂಪ್ರದಾಯಕ್ಕೆ ಸಾಹಿತ್ಯ ಪರಂಪರೆಯಿದೆ, ಮಧ್ಯಕಾಲಿನ ಭಕ್ತಿಪಂಥದ ಪರಂಪರೆಯೇ ಭಜನೆಗೆ ಹಿನ್ನಲೆಯಾಗಿದೆ, ಅಷ್ಟಲ್ಲದೆ ದಾಸ ಸಾಹಿತ್ಯದ ನೇತಾರರೂ ಇದೇ ಪರಂಪರೆಯಲ್ಲಿ ಬರುತ್ತಾರೆ, ಇತ್ತೀಚಿನ ದಿನಗಳಲ್ಲಿ ಭಜನೆಯನ್ನು ಜನಪದ ಪರಂಪರೆಗೆ ತಂದು ನಿಲ್ಲಿಸಿದ ಅನೇಕ ಹಿರಿಯ ಕವಿಗಳು ಇಲ್ಲಿ ಆಗಿ ಹೋಗಿದ್ದಾರೆ, ಕಲಬುರ್ಗಿಯ ಕಡಗೋಳ ಮಡಿವಾಳಪ್ಪ, ಅದೇ ಜಿಲ್ಲೆಯ ರಾಮಾಪುರದ ಬಕ್ಕಪ್ಪ, ಶಿಶುನಾಳ ಶರೀಫ, ಕಲಬುರ್ಗಿಯ ಕೂಡಲೂರು ಬಸವಲಿಂಗ ಶರಣ, ಬಿಜಾಪುರದ ಸಾರವಾಡದ ಚಿಕ್ಕಪ್ಪಯ್ಯ ಇವರೆಲ್ಲ ಉತ್ತರ ಕರ್ನಾಟಕದಲ್ಲಿ ಭಜನೆ ಸಂಪ್ರದಾಯವನ್ನು ಹಿರಿದಾಗಿ ಬೆಳೆಸಿದವರು, ಉಳಿದಂತೆ ದಕ್ಷಿಣ ಕರ್ನಾಟಕದಲ್ಲಿ ಆಯಾ ಪ್ರದೇಶದ ವೃತ್ತಿಗಾಯಕರೇ ಭಜನೆಯನ್ನು ಮುಂದುವರಿಸಿದ್ದಾರೆ, ಆದರೆ ದಕ್ಚಿಣ ಕನ್ನಡದಲ್ಲಿ ಅಂತಹ ಪರಂಪರೆ ಕಂಡುಬರುವುದಿಲ್ಲ.

ಗ್ರಂಥಸೂಚಿ[ಬದಲಾಯಿಸಿ]

  1. ಸಂಪಾದಕ: ಹಿ.ಚಿ. ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೬೬.

ಉಲ್ಲೇಖಗಳು[ಬದಲಾಯಿಸಿ]

  1. James G. Lochtefeld (2002). The Illustrated Encyclopedia of Hinduism: A-M. The Rosen Publishing Group. p. 97. ISBN 978-0-8239-3179-8.
  2. Arnold P. Kaminsky; Roger D. Long (2011). India Today: An Encyclopedia of Life in the Republic. ABC-CLIO. pp. 484–485. ISBN 978-0-313-37463-0.
  3. Anna King, John Brockington, The Intimate Other: Love Divine in Indic Religions, Orient Longman 2005, p 179.
  4. Denise Cush; Catherine Robinson; Michael York (2012). Encyclopedia of Hinduism. Routledge. pp. 87–88. ISBN 978-1-135-18979-2.
  5. Amaresh Datta (1987). Encyclopaedia of Indian Literature: A-Devo. Sahitya Akademi. pp. 430–431. ISBN 978-81-260-1803-1.
  6. Cutler, Norman (1987). Songs of Experience. Indiana University Press. p. 1. ISBN 978-0-253-35334-4.
  7. Pechilis Prentiss, Karen (1999). The Embodiment of Bhakti. US: Oxford University Press. p. 24. ISBN 978-0-19-512813-0.
  8. Werner, Karel (1993). Love Divine: studies in bhakti and devotional mysticism. Routledge. p. 168. ISBN 978-0-7007-0235-0.
  9. Monier Monier-Williams (1872). A Sanskrit-English Dictionary. Oxford University Press. p. 695.
  10. Natalia Lidova (1994). Drama and Ritual of Early Hinduism. Motilal Banarsidass. pp. 111–114. ISBN 978-81-208-1234-5.
  11. Guy Beck (1998). Bruno Nettl; et al. (eds.). The Garland Encyclopedia of World Music: South Asia, the Indian subcontinent. Routledge. pp. 251–254. ISBN 978-0-8240-4946-1.
  12. Kuppuswamy, Gowri; Hariharan, M. "BHAJANA TRADITION IN SOUTH INDIA" (PDF). Archived from the original (PDF) on 16 June 2022. Retrieved 26 March 2022. {{cite journal}}: Cite journal requires |journal= (help)
  13. Guy Beck (1998). Bruno Nettl; et al. (eds.). The Garland Encyclopedia of World Music: South Asia, the Indian subcontinent. Routledge. pp. 246–247. ISBN 978-0-8240-4946-1.
  14. Annette Wilke; Oliver Moebus (2011). Sound and Communication: An Aesthetic Cultural History of Sanskrit Hinduism. Walter de Gruyter. pp. 886–898. ISBN 978-3-11-024003-0.
  15. Stephen Breck Reid (2001). Psalms and Practice: Worship, Virtue, and Authority. Liturgical Press. p. 10. ISBN 978-0-8146-5080-6.
  16. Annette Wilke; Oliver Moebus (2011). Sound and Communication: An Aesthetic Cultural History of Sanskrit Hinduism. Walter de Gruyter. pp. 2–3, 33–37. ISBN 978-3-11-024003-0.
  17. Movindri Reddy (2015). Social Movements and the Indian Diaspora. Routledge. p. 164. ISBN 978-1-317-47897-3.
  18. Helen Myers (1998). Music of Hindu Trinidad: Songs from the India Diaspora. University of Chicago Press. pp. 88, 128. ISBN 978-0-226-55453-2.
  19. O'Callaghan, Marion (1998). "Hinduism in the Indian Diaspora in Trinidad". Journal of Hindu-Christian Studies. 11 (1). doi:10.7825/2164-6279.1178.
  20. Guy Beck (1998). Bruno Nettl; et al. (eds.). The Garland Encyclopedia of World Music: South Asia, the Indian subcontinent. Routledge. pp. 247–253. ISBN 978-0-8240-4946-1.
  21. Guy Beck (1998). Bruno Nettl; et al. (eds.). The Garland Encyclopedia of World Music: South Asia, the Indian subcontinent. Routledge. pp. 254–255. ISBN 978-0-8240-4946-1.
  22. ೨೨.೦ ೨೨.೧ Peter Lavezzoli (2006). The Dawn of Indian Music in the West. A&C Black. pp. 371–372. ISBN 978-0-8264-1815-9.
  23. Sara Black Brown (2014). "Krishna, Christians, and Colors: The Socially Binding Influence of Kirtan Singing at a Utah Hare Krishna Festival". Ethnomusicology. University of Illinois Press. 58 (3): 454–480. doi:10.5406/ethnomusicology.58.3.0454.
  24. Alanna Kaivalya (2014). Sacred Sound: Discovering the Myth and Meaning of Mantra and Kirtan. New World. pp. 117–122. ISBN 978-1-60868-244-7.
  25. Alanna Kaivalya (2014). Sacred Sound: Discovering the Myth and Meaning of Mantra and Kirtan. New World. pp. 3–17, 34–35. ISBN 978-1-60868-244-7.
  26. Sara Brown (2012), Every Word Is a Song, Every Step Is a Dance, PhD Thesis, Florida State University (Advisor: Michael Bakan), pages 25-26, 87-88, 277
  27. Malory Nye (2013). A Place for Our Gods: The Construction of an Edinburgh Hindu Temple Community. Routledge. p. 113. ISBN 978-1-136-78504-7.
  28. Peter J. Claus; Sarah Diamond; Margaret Ann Mills (2003). South Asian Folklore: An Encyclopedia. Routledge. p. 302. ISBN 978-0-415-93919-5.
  29. M. Whitney Kelting (2001). Singing to the Jinas: Jain Laywomen, Mandal Singing, and the Negotiations of Jain Devotion. Oxford University Press. pp. 28–29, 84. ISBN 978-0-19-803211-3.
  30. Sukomal Chaudhuri (1982). Contemporary Buddhism in Bangladesh. Atisha Memorial. p. 81.
  31. Chatterjee, Aparna (2022). The Barua Buddhists: Lineage and Cultural Interface, pp. 91-92. Shhalaj Publishing House.
  32. J. Gordon Melton; Martin Baumann (2010). Religions of the World: A Comprehensive Encyclopedia of Beliefs and Practices, 2nd Edition. ABC-CLIO. p. 1397. ISBN 978-1-59884-204-3.
  33. Kristen Haar; Sewa Singh Kalsi (2009). Sikhism. Infobase. pp. 60–61. ISBN 978-1-4381-0647-2.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.chped.com/w/index.php?title=ಭಜನೆ&oldid=1232280" ಇಂದ ಪಡೆಯಲ್ಪಟ್ಟಿದೆ