ವಿಷಯಕ್ಕೆ ಹೋಗು

ಐರಿಷ್ ರಾಷ್ಟ್ರೀಯ ರಂಗಮಂದಿರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಐರಿಷ್ ರಾಷ್ಟೀಯ ರಂಗಮಂದಿರ
ಐರಿಷ್ ರಾಷ್ಟೀಯ ರಂಗಮಂದಿರ

ಐರಿಷ್ ರಾಷ್ಟ್ರೀಯ ರಂಗಮಂದಿರ:ಅಥವಾ ಅಬ್ಬೆ ರಂಗಮಂದಿರ, ಐರಿಷ್ ಸಾಹಿತ್ಯವನ್ನು ಪುನರುಜ್ಜೀವನ ಗೊಳಿಸುವಲ್ಲಿ ಪ್ರಧಾನ ಪಾತ್ರವಹಿಸಿದ್ದ ಕವಿ ಡಬ್ಲ್ಯೂ.ಬಿ.ಯೇಟ್ಸನೇ ಮುಖ್ಯವಾಗಿ ಈ ರಂಗಮಂದಿರದ ಸ್ಥಾಪಕ ಮತ್ತು ಪ್ರಥಮ ಸಂಚಾಲಕ.[೧]

ಸ್ಥಾಪನೆ ಮತ್ತು ಇತಿಹಾಸ[ಬದಲಾಯಿಸಿ]

A poster for the opening run at the Abbey Theatre from 27 December 1904 to 3 January 1905

ಐರಿಷ್ ಸಂಸ್ಕೃತಿಯನ್ನು ಸಹಜವಾಗಿ ಪ್ರತಿಬಿಂಬಿಸುವಂಥ ನಾಟಕಗಳ ಸೃಷ್ಟಿಗೂ ಪ್ರದರ್ಶನಕ್ಕೂ ಅವರದೇ ಆದ ಒಂದು ರಂಗಮಂದಿರದ ಅಗತ್ಯವಿತ್ತು. ಲಂಡನ್ ಮತ್ತು ಡಬ್ಲಿನ್ ನಗರಗಳಲ್ಲಿದ್ದ ಐರಿಷ್ ಸಾಹಿತ್ಯ ಸಂಘಗಳಿತ್ತ ಬೆಂಬಲದಿಂದಲೂ ಎಡ್ವರ್ಡ್ ಮಾರ್ಟಿನ್, ಜಾರ್ಜ್ ಮೂರ್, ಲೇಡಿ ಗ್ರಿಗರಿ ಮುಂತಾದ ಆಪ್ತರ ಸಹಾಯದಿಂದಲೂ ಯೇಟ್ಸ್‌ನ ನೇತೃತ್ವದಲ್ಲಿ ಐರಿಷ್ ಸಾಹಿತ್ಯ ನಾಟ್ಯಸಭಾ ಎಂಬ ಸಂಸ್ಥೆ 1899ರಲ್ಲಿ ಸ್ಥಾಪಿತವಾಯಿತು. ಡಬ್ಲಿನ್ ಅದರ ಕೇಂದ್ರವಾಯಿತು.

Lady Gregory pictured on the frontispiece to Our Irish Theatre: A Chapter of Autobiography (1913)

ಮೊದಮೊದಲು ಪ್ರದರ್ಶಿತವಾದ ಯೇಟ್ಸ್‌ನ ಮತ್ತು ಅವನ ಸಂಗಡಿಗರ ನಾಟಕಗಳಿಗೆ ನಿರೀಕ್ಷಿಸಿದ ಯಶಸ್ಸು ದೊರೆಯಲಿಲ್ಲ. ಆದರೆ ಅನೇಕ ನಾಟಕಕಾರರ ಮತ್ತು ಕಲಾಭಿಮಾನಿಗಳ ಗಮನವನ್ನು ಸೆಳೆಯುವಷ್ಟು ಮಟ್ಟಿಗೆ ಈ ನಾಟ್ಯಮಂಡಲಿ ಬೆಳೆಯಿತು. 1904ರಲ್ಲಿ ಎ.ಇ.ಎಫ್.ಹಾರ್ನಿಮನ್ ಎಂಬ ಐರಿಷ್ ಶ್ರೀಮಂತಳ ಅಭಿಮಾನ ಔದಾರ್ಯಗಳು ನೀಡಿದ ಬಳುವಳಿಯಾಗಿ ಅಬೆ ರಸ್ತೆಯಲ್ಲಿನ ಪುಟ್ಟ ರಂಗಮಂದಿರವೊಂದು ಯೇಟ್ಸನ ನಾಟ್ಯಸಂಸ್ಥೆಗೆ ದೊರೆಯಿತು. ಅಂದಿನಿಂದ ಸಾಹಿತ್ಯ ನಾಟಕ ಮಂಡಳಿಗೆ ಐರಿಷ್ ರಾಷ್ಟ್ರೀಯ ರಂಗಮಂದಿರ ಎಂಬ ಹೊಸ ಹೆಸರಾಯಿತು. ಅಬೆ ರಂಗಮಂದಿರವನ್ನು ಕಾವ್ಯನಾಟಕಗಳ ಪ್ರಯೋಗಕ್ಕೆ ಅಳವಡಿಸಲು ಯೇಟ್ಸ್‌ ಬಹುವಾಗಿ ಪ್ರಯತ್ನಿಸಿದ. ಈ ಪ್ರಯತ್ನ ಸಫಲವಾದುದಾಗಲಿ ಕಾವ್ಯನಾಟಕಗಳ ಪ್ರಯೋಗ ಯಶಸ್ವಿಯಾದುದಾಗಲಿ ಸಂದೇಹವೇ. ಆದರೆ ಯೇಟ್ಸ್‌ನ ಅವಿರತ ಪರಿಶ್ರಮದಿಂದ ಈ ರಂಗಮಂದಿರ ಪ್ರಯೋಗಶೀಲತೆಗೆ ಹೆಸರಾಯಿತು. ಪ್ರತಿಭಾಶಾಲಿಗಳಾದ ನಾಟಕಕಾರರಿಗೆ ಸ್ಫೂರ್ತಿಯ ಕೇಂದ್ರವಾಯಿತು. ಜೆ.ಎಂ.ಸಿಂಜ್ನಂಥ ಶ್ರೇಷ್ಠ ನಾಟಕಕಾರನ ಪ್ರತಿಭೆಯನ್ನು ಮೊದಲು ಗುರುತಿಸಿ ಸರಿಯಾದ ಮಾರ್ಗದರ್ಶನವಿತ್ತುದೊಂದು ಯೇಟ್ಸ್‌ನ ಅಮೋಘವಾದ ಕಾಣಿಕೆ, ಐರಿಷ್ ರಂಗಭೂಮಿಗೆ. ನಾಗರಿಕತೆಯ ಕುಪ್ರಭಾವದಿಂದ ದೂರವಾಗಿದ್ದ ಪಶ್ಚಿಮ ಐರ್ಲೆಂಡಿನ ಮುಗ್ಧ ಕೃಷಿಕರ ಸರಳಜೀವನವನ್ನು ಕುರಿತು, ಹಳೆಯ ಗೇಲಿಕ್ ಭಾಷೆಯ ಸತ್ತ್ವವನ್ನೂ ಸೊಗಡನ್ನೂ ಒಳಗೊಂಡ ಇಂಗ್ಲಿಷ್ ಆಡುಮಾತಿನಲ್ಲಿ ಸಿಂಜ್ ನಾಟಕಗಳನ್ನು ಬರೆದ. ಹೀಗೆಯೇ ‘ಎ.ಇ.’, ಲೇಡಿ ಗ್ರಿಗರಿ, ಪಾದ್ರಿಯಕ್ ಕೋಲಮ್ ಅಪೂರ್ವವಾದ ನಾಟಕಗಳನ್ನು ರಚಿಸಿದರು.

ನಾಟಕ ಮತ್ತು ರಂಗಮಂದಿರಗಳ ಬಗ್ಗೆ ಯೇಟ್ಸ್‌ ಕೆಲವು ನಿಖರವಾದ ಧ್ಯೇಯ, ಶೀಲ, ನಿಷ್ಠೆಗಳನ್ನಿರಿಸಿಕೊಂಡಿದ್ದ. ರಂಗಮಂದಿರ ದೇಗುಲದಂತೆ ಪವಿತ್ರವಾದುದು. ನಾಟಕದ ಉದ್ದೇಶ ಉದಾತ್ತವಾದುದು, ಜನಜಂಗುಳಿಗೆ ಅಗ್ಗದ ಮನರಂಜನೆಯನ್ನೊದಗಿಸುವುದಿಲ್ಲ. ಕವಿಯ ಅನುಭಾವ, ದರ್ಶನ ಪ್ರೇಕ್ಷಕರ ಮನದಲ್ಲಿ ಪಡಿಮೂಡುವಂತಾಗಬೇಕು.

John Millington Synge, author of The Playboy of the Western World, which caused riots at the Abbey on the play's opening night

ವಾಸ್ತವತೆಗಿಂತ ದರ್ಶನಧ್ವನಿಯೇ ಪ್ರಧಾನವಾಗಿದ್ದ ಯೇಟ್ಸನ ಕಾವ್ಯನಾಟಕಗಳು ಸ್ವಪ್ನಶೀಲವಾಗಿದ್ದುವು. ಐರಿಷ್ ಪ್ರೇಕ್ಷಕರ ಮನೋಧರ್ಮ ಆದರ್ಶಕ್ಕಿಂತ ವಾಸ್ತವತೆಯ ಕಡೆಯೇ ಒಲಿಯುತ್ತಿರುವುದು ಸ್ಪಷ್ಟವಾದ ಅನಂತರ ಯೇಟ್ಸ್‌ ಕಾವ್ಯನಾಟಕಗಳನ್ನು ಬಿಟ್ಟು ಗದ್ಯನಾಟಕಗಳ ರಚನೆಗೆ ತೊಡಗಿದ. ತನ್ನ ಧ್ಯೇಯವನ್ನು ಮಾತ್ರ ಜನ ಅಪೇಕ್ಷಿಸುವ ಅಗ್ಗದ ಮನರಂಜನೆಗೆ ಎಂದಿಗೂ ಬಲಿಕೊಡದೆ ನಾಟ್ಯಮಂದಿರದ, ನಾಟಕಸಾಹಿತ್ಯದ ಶ್ರೇಷ್ಠಮಟ್ಟವನ್ನೂ ಶೀಲವನ್ನೂ ಕೊನೆಯವರೆಗೂ ಕಾಯ್ದುಕೊಂಡು ಬಂದ ಶ್ರೇಯಸ್ಸು ಅವನದು. ಇತಿಹಾಸದಲ್ಲಿ ಐರಿಷ್ ರಾಷ್ಟ್ರೀಯ ರಂಗಮಂದಿರ ಚಿರಸ್ಮರಣೀಯವಾಗಿರುವುದೂ ಅದರಿಂದಲೇ.

ಉಲ್ಲೇಖಗಳು[ಬದಲಾಯಿಸಿ]

  1. "Abbey Theatre Austin". Encyclopædia Britannica. Vol. I: A-Ak – Bayes (15th ed.). Chicago, Illinois: Encyclopædia Britannica, Inc. 2010. pp. 12. ISBN 978-1-59339-837-8.